ನೀಕ್ಯಾಂಡರ್, ಕಾರ್ಲ್ ಅಗಸ್ಟ್
	1799-1839. ಸ್ವೀಡಿಷ್ ಕವಿ. ಹುಟ್ಟಿದ್ದು ಸ್ವೀಡನ್ನಿನ ಸ್ಟ್ರಾಂಗ್ನಾಸ್‍ನಲ್ಲಿ, ಓದಿದ್ದು ಉಪ್ಸಾಲಾ ವಿಶ್ವವಿದ್ಯಾನಿಲಯದಲ್ಲಿ. ಸ್ವೀಡನ್ನಿನ ದಂತಕಥೆ, ಚರಿತ್ರೆ ಮೊದಲಾದ ಕಥಾವಸ್ತುಗಳನ್ನು ಆಧರಿಸಿರುವ ಈತನ ಆರಂಭಿಕ ಕೃತಿಗಳು ಈತನಿಗೆ ಮನ್ನಣೆ ತಂದುಕೊಟ್ಟವು. ಉದಾಹರಣೆಗೆ ಈತನ ನಾಟಕೀಯ ಕವನ ರುನೆಸ್ವಾರ್ದೆತ್ (1820, ರುನಿಕ್ ಖಡ್ಗ). ಈತನ ತಾಸೋಸ್ ದೋದ್ (ತಾಸೊಸನ ಮರಣ) ಎಂಬ ಕವನಕ್ಕೆ ಸ್ವೀಡಿಷ್ ಅಕಾಡೆಮಿ ಪ್ರಶಸ್ತಿ ಲಭಿಸಿತು. (1826). ಇಟಲಿಯಲ್ಲಿ ಈತ ಕೈಗೊಂಡ (1827-1829) ಪ್ರವಾಸಾನುಭವ ಮಿನ್ನರ್‍ಫ್ರಾನ್ ಸೋದೆರ್ನ್ (ದಕ್ಷಿಣದ ನೆನಪುಗಳು) ಎಂಬ ಪುಸ್ತಕದಲ್ಲಿದೆ. ಹೆಸ್ಪೆರಿದರ್ (ಅಪ್ಸರಸ್ತ್ರೀಯರು) ಎಂಬುದರಲ್ಲಿ ಮತ್ತಿತರ ಭಾವಗೀತಾತ್ಮಕ ಕವನಗಳಿವೆ. ನೆಪೋಲಿಯನ್ನನ ಶೌರ್ಯ ಪರಾಕ್ರಮವನ್ನು ಬಹುವಾಗಿ ಪ್ರಶಂಸಿಸಿ ಲೆಜೋನೆ ಇ ಓಕ್ನೆನ್ (ಕಾಡಿನಲ್ಲಿ ಸಿಂಹ) ಎಂಬ ಕೃತಿಯೊಂದನ್ನು (1838); ಷೇಕ್ಸ್‍ಪಿಯರ್ ಮತ್ತು ಷಿಲರ್ ಕವಿಗಳ ಹಲವಾರು ಕೃತಿಗಳನ್ನು ಭಾಷಾಂತರಿಸಿದ್ದಾನೆ.									    (ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ